ಅಸೀರ್‍ಘರ್
 	
ಮಧ್ಯಕಾಲೀನ ಭಾರತದ ಪ್ರಸಿದ್ಧ ಕೋಟೆ. ತಪತೀ ನದಿಯ ಬಳಿ ಸಾತ್ಪುರ ಪರ್ವತಶ್ರೇಣಿಯ ಮಧ್ಯಭಾಗದಲ್ಲಿದೆ. ಪಕ್ಕದ್ದೇ ಬರ್ಹಾಂಪುರ. ಇವುಗಳ ಪಕ್ಕದಲ್ಲಿದ್ದ ಖಾನ್ದೇಶದ ದೊರೆ ನಾಸಿರ್ ಬರ್ಹಾಮ್ ಪಟ್ಟಣವನ್ನು ಅಭಿವೃದ್ಧಿಗೊಳಿಸಿ [1400] ಅಸೀರ್‍ಘರ್‍ನ್ನು ಗೆದ್ದ. ಮುಂದೆ ಅಕ್ಬರನ ಕಣ್ಣು ಈ ಕೋಟೆಯಮೇಲೆ ಬಿತ್ತು. ಅದನ್ನು ವಶಪಡಿಸಿಕೊಳ್ಳಲು ಆತ ಬಹು ಸಾಹಸ ಮಾಡಿದ ಖಾನ್ದೇಶದ ಅಂದಿನ ದೊರೆ ಬಹದ್ದೂರ್ ಫರೂಕಿಯನ್ನು ಸರೆಹಿಡಿದು 1601 ರಲ್ಲಿ ಅಸೀರ್‍ಘರ್‍ನ್ನು ವಶಪಡಿಸಿಕೊಂಡ.
ಈ ಪ್ರಖ್ಯಾತವಾದ ಕೋಟೆಯನ್ನು 18ನೇ ಶತಮಾನದ ಎರಡನೆಯ ದಶಕದಲ್ಲಿ ನಿಜಾಮ್-ಉಲ್-ಮುಲ್ಕನು ಮುತ್ತಿ ಮೊಗಲ ಪಕ್ಷದ ಸಯದ್ ಸೋದರರಿಂದ ಕಿತ್ತುಕೊಂಡ. 1756ರಲ್ಲಿ ಇದು ಮತ್ತೆ ನಿಜಾಮ ಸಲಬತ್‍ಜಂಗನ ವಶವಾಯಿತು. ಅನಂತರ 1760ರಲ್ಲಿ ಮರಾಠರಿಗೂ ಹೈದರಾಬಾದಿನವರಿಗೂ ನಡೆದ ಯುದ್ಧದ ಪರಿಣಾಮವಾಗಿ ಕೋಟೆ ಮರಾಠರ ವಶವಾಯಿತು. ಎರಡನೆಯ ಆಂಗ್ಲ-ಮರಾಠ ಯುದ್ಧಾನಂತರ ಕೋಟೆ ಇಂಗ್ಲೀಷರ ವಶವಾಯಿತು [1803]. ಹೀಗೆ ಈ ಒಂದು ಕೋಟೆಯ ಹಿಂದೆ ಐದುನೂರು ವರ್ಷಗಳ ಚರಿತ್ರೆ ಅಡಗಿದೆ; ಘರ್ಷಣೆ, ಪ್ರತಿ ಘರ್ಷಣೆ, ಆತ್ಮಾರ್ಪಣೆಗಳ ಕಥೆ ಹರಡಿ ನಿಂತಿದೆ.            

(ಬಿ.ಕೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ